ಟೈಫೇಸೀ

ಏಕದಳ ಸಸ್ಯಗಳ ಗುಂಪಿಗೆ ಸೇರಿದ ಒಂದು ಕುಟುಂಬ ಟೈಫ ಎಂಬ ಒಂದೇ ಒಂದು ಜಾತಿ ಇದರ ಪ್ರತಿನಿಧಿ.  ಇದರಲ್ಲಿ 12 ಪ್ರಭೇದಗಳಿದ್ದು ಇವಕ್ಕೆ ಆನೆಹುಲ್ಲು, ಚೀಣಿಹುಲ್ಲು, ಜೊಂಡುಹುಲ್ಲು ಎಂಬ ಹೆಸರುಗಳಿವೆ. ಇವು ಉಷ್ಣವಲಯ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಸಮುದ್ರಮಟ್ಟದಿಂದ 1,000 ಮೀ. ವರೆಗಿನ ಪ್ರದೇಶಗಳ ಕೆರೆ, ಕಟ್ಟೆ, ಸರೋವರ, ನದಿದಂಡೆ ಮತ್ತು ಇತರ ಜೌಗುಪ್ರದೇಶಗಳಲ್ಲಿನ ಬೆಳೆಯುತ್ತವೆ. ಈ ಗಿಡಗಳ ಕಾಂಡ ಭೂಮಿಯ ಮೇಲೆ ಉದ್ದಕ್ಕೂ ಬೆಳೆಯುವ ಪ್ರಕಂದ ಮಾದರಿಯದು. ಇದು ಹಲವಾರು ವರ್ಷಗಳ ಕಾಲ ಸಜೀವವಾಗಿರಬಲ್ಲದು. ಇದರ ಮೇಲೆ ಎರಡು ಸಾಲಿನಲ್ಲಿ ತೆಳುವಾದ ಪೊರೆಗಳು ಜೋಡಣೆಗೊಂಡಿವೆ. ಈ ಪೊರೆಗಳ ಕಂಕುಳಿನಿಂದ ರೆಂಬೆಗಳು ಮೂಡುವುವು. ರೆಂಬೆಗಳ ಮೇಲೆ ಎರಡು ಸಾಲಿನಲ್ಲಿ ಜೋಡಿಸಲ್ಪಟ್ಟ ಹಸಿರು ಎಲೆಗಳಿವೆ. ಬುಡದ ಎಲೆಗಳು ತೆಳುವಾದ ಪೊರೆಯಂತಿದ್ದು ಪ್ರಕಂದದ ಮೇಲಿನ ಪೊರೆಗಳನ್ನು ಹೋಲುತ್ತವೆ. ಉಳಿದ ಎಲೆಗಳು 2-3 ಮೀ. ಉದ್ದವೂ ಸುಮಾರು 2.5 ಸೆಂ.ಮೀ. ಅಗಲವೂ ಇವೆ. ಹೊಗೊಂಚಲು ಉರುಳೆಯಂತಿರುವ ಕದಿರು (ಸ್ಟೈಕ್) ಮಾದರಿಯದು. ಇದರ ಉದ್ದ ಸುಮಾರು 30 ಸೆಂ.ಮೀ. ಗಂಡು ಮತ್ತು ಹೆಣ್ಣು ಸ್ಟೈಕ್‍ಗಳು ಬೇರೆಬೇರೆಯಾಗಿವೆ. ಆದರೆ ಎರಡು ಬಗೆಯವೂ ಒಂದೇ ರೆಂಬೆಯಲ್ಲಿದ್ದು ಗಂಡು ಸ್ಪೈಕ್ ಮೇಲ್ಭಾಗದಲ್ಲಿಯೂ ಹೆಣ್ಣು ಸ್ಪೈಕ್ ಕೆಳಭಾಗದಲ್ಲಿಯೂ ಇರುತ್ತವೆ. ಕೆಲವೊಮ್ಮೆ ಪಕ್ಕಪಕ್ಕದಲ್ಲಿರುವುದೂ ಉಂಟು. ಹೂಗಳು ಏಕಲಿಂಗಿಗಳು. ಗಂಡು ಹೂಗಳು ಸುತ್ತ ರೋಮಗಳಂಥ ರಚನೆಗಳುಂಟು. ಇವನ್ನು ಬ್ರಾಕ್ಟ್‍ಗಳೆಂದು ಪರಿಗಣಿಸಲಾಗಿದೆ. ಗಂಡುಹೂಗಳಲ್ಲಿ 2-5 ಕೇಸರಗಳಿವೆ. ಪರಾಗ ಚತುಷ್ಟಕಗಳಲ್ಲಿ (ಟೆಟ್ರಡ್ಸ್) ಇವೆ. ಹಲವಾರು ಪ್ರಭೇದಗಳ ಹೆಣ್ಣು ಹೂಗಳಲ್ಲಿ ಬ್ರಾಕ್ಟ್‍ಗಳಿವೆ. ಕೆಲವು ಪ್ರಭೇದಗಳಲ್ಲಿ ಮಾತ್ರ ಕಾಣಬರುವುದಿಲ್ಲ. ಇವು ಹೊಗೊಂಚಲಿನ ರೆಂಬೆಗೆ ನೇರವಾಗಿ ಅಂಟಿಕೊಂಡಿದೆ. ಅಂಡಾಶಯ ಕೆಳಭಾಗದಲ್ಲಿರುವ ಗೈನೋಫೋರ್ ಎಂಬ ಅಂಟಿಕೊಂಡಿರದೆ ಅಂಡಾಶಯದಲ್ಲಿ ಒಂದೇ ಒಂದು ಕಾರ್ಪೆಲ್ ಉಂಟು. ಅಂಡಕವೂ ಒಂಟಿಯಾಗಿದೆ. ಕೆಲವು ಹೊಗಳು ಬಂಜೆಗಳಾಗಿದ್ದು ಅವುಗಳಲ್ಲಿ ಪಿಸ್ಟಿಲೋಡ್ ಎಂಬ ರಚನೆ ಮಾತ್ರ ಇರುತ್ತದೆ. ಟೈಫೇಸೀ ಕುಟುಂಬದ ಹಣ್ಣು ಎಕೀನ್ ಮಾದರಿಯದು. ಇದರ ಮೇಲೆ ಕೆಳಮುಖವಾಗಿ ಬೆಳೆದ ರೋಮಗಳಿವೆ. ಹಣ್ಣು ಪಕ್ವವಾದಾಗ ಗೈನೋಫೋರ್ ಉದ್ದವಾಗಿ ಬೆಳೆಯುವುದರಿಂದ ಫಲ ಪ್ರಸಾರಕ್ಕೆ ಬಹಳ ಅನುಕೂಲವಾಗಿದೆ. ಬೀಜಗಳು ಬಹಳ ಚಿಕ್ಕವು.

ಟೈಫೇಸೀ ಕುಟುಂಬದ ಗಿಡಗಳು ಹೆಚ್ಚು ಉಪಯುಕ್ತವಲ್ಲ. ಟೈ. ಅಂಗುಸ್ಟೇಟ ಮತ್ತು ಟೈ. ಎಲಿಫಂಟಮ್‍ನ ಎಲೆಗಳನ್ನು ಡೆಹ್ರಾಡೂನ್, ಅಸ್ಸಾಂ ಮತ್ತು ಬಂಗಾಳಗಳಲ್ಲಿ ಚಾಪೆಗಳನ್ನು ಮತ್ತು ಕುರ್ಚಿ ಹಾಗು ಸೋಫಾಗಳ ತಳವನ್ನು ಹೆಣೆಯಲು ಉಪಯೋಗಿಸುತ್ತಾರೆ. ಟೈ. ಅಂಗುಸ್ಟೇಟದ ಪರಾಗವನ್ನು ಸಂಗ್ರಹಿಸಿ ರೊಟ್ಟಿಯಂತೆ ಮಾಡಿ ತಿನ್ನುವ ಪದ್ಧತಿ ಸಿಂಧ್ ಪ್ರದೇಶದ ಜನರಲ್ಲುಂಟು.
(ಕೆ.ಎಸ್.ಎನ್.ಎ.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ